Showing posts with label ಸಿಹಿತಿನಿಸು. Show all posts
Showing posts with label ಸಿಹಿತಿನಿಸು. Show all posts

ಬಾಳೆಹಣ್ಣು ಬನ್ಸ್


        
ಬೇಕಾಗುವ ಸಾಮಗ್ರಿಗಳು
  • ಮೈದಾ - ೨ ಕಪ್
  • ಬಾಳೆಹಣ್ಣು (ನೇಂದ್ರ) - ೫-೬
  • ಉಪ್ಪು - ರುಚಿಗೆ
  • ಜೀರಿಗೆ - ೧ ಚಮಚ
  • ಅಡುಗೆ ಎಣ್ಣೆ - ಕರಿಯಲು
ಮಾಡುವ ವಿಧಾನ
  • ಬಾಳೆ ಹಣ್ಣನ್ನು ಚೆನ್ನಾಗಿ ಕಿವುಚಿ. ಇದಕ್ಕೆ ಮೈದಾ, ಜೀರಿಗೆ ಹಾಗು ಉಪ್ಪು ಸೇರಿಸಿ ಮೃದುವಾಗಿ ಕಲಸಿ,
  • ಈ ಮಿಶ್ರಣವನ್ನು ಒಂದು ಬಿಳಿಯ ಒದ್ದೆ ಬಟ್ಟೆಯಲ್ಲಿ ಸುತ್ತಿಡಿ. ಕನಿಷ್ಠ ೨-೩ ತಾಸು ನೆನೆಯಲು ಬಿಡಿ.
  • ನಂತರ ಇದನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಪೂರಿಯ ಹಾಗೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.

ಉಪಯುಕ್ತ ಮಾಹಿತಿ :

ಒದ್ದೆ ಬಟ್ಟೆಯಲ್ಲಿ ಸುತ್ತಿಡುವುದರಿಂದ, ಎಣ್ಣೆಯಲ್ಲಿ ಕರಿದಾಗ, ಚೆನ್ನಾಗಿ ಊದುತ್ತದೆ(puffyness).
ಸಣ್ಣ ಉರಿಯಲ್ಲಿ ಕರಿಯುವುದರಿಂದ, ಹಿಟ್ಟಿನ ಒಳ ಪದರ ಚೆನ್ನಾಗಿ ಬೇಯುತ್ತದೆ.

ಕೃಪೆ: ಸೌಮ್ಯ ಹೆಗಡೆ

ಅತ್ರಸ / atraasa


ಬೇಕಾಗುವ ಸಾಮಗ್ರಿಗಳು
  • ದೋಸೆ ಅಕ್ಕಿ - ೨ ಕಪ್
  • ಬೆಲ್ಲ - ೨ ಕಪ್
  • ತೆಂಗಿನಕಾಯಿ - ೧
  • ಅಡುಗೆ ಎಣ್ಣೆ - ಕರಿಯಲು 
ಮಾಡುವ ವಿಧಾನ

  • ಅಕ್ಕಿಯನ್ನು ೧೦ ನಿಮಿಷ ನೆನೆಸಿ. ನಂತರ, ನೀರು ಬಸೆದು . ಅದನ್ನು ಮಿಕ್ಷಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.
  • ತೆಂಗಿನ ತುರಿಗೆ ಬೆಲ್ಲ (ಜೋನಿ ಬೆಲ್ಲ)ವನ್ನು ಹಾಕಿ, ಮದ್ಯಮ ಉರಿಯಲ್ಲಿ ಚೆನ್ನಾಗಿ ಕುದಿಸಿ.
  • ಇದು ಕುದಿಯುತ್ತಿರುವಾಗ, ಅಕ್ಕಿ ಪುಡಿಯನ್ನು ಸ್ವಲ್ಪ ಸ್ವಲ್ಪವೆ ಹಾಕುತ್ತ ಕಲುಕುತ್ತಿರಿ.
  • ಈ ಮಿಶ್ರಣ ದಪ್ಪವಾಗುತ್ತಿದಂತೆ, ಸ್ಟೋವ್ ನಿಂದ ಕೆಳಗಿಳಿಸಿ ತಣಿಯಲು ಬಿಡಿ.
  • ತಣಿದ ನಂತರ ಮತ್ತಷ್ಟು ದಪ್ಪಗಾದ ಈ ಮಿಶ್ರಣವನ್ನು, ಅಂಗೈ ಆಕಾರದಲ್ಲಿ ಒತ್ತಿ, ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿಯಿರಿ.
ಕೃಪೆ: ಸೌಮ್ಯ ಹೆಗಡೆ

ಕಡ್ಲೆಮಡ್ಡಿ / kadlemaddi



     ಬೇಕಾಗುವ ಸಾಮಗ್ರಿಗಳು

  • ಕಡಲೆಬೇಳೆ - ೨ ಕಪ್ 
  • ಬೆಲ್ಲ - ೨ ೧/೨ ಕಪ್ 
  • ಉಪ್ಪು -  ಚಿಟಿಕೆ
  • ತೆಂಗಿನ ತುರಿ - ೧ ಕಪ್
  • ಏಲಕ್ಕಿ ಪುಡಿ - ೧/೨ ಚಮಚ
  • ನೀರು - ೩-ಕಪ್
ಮಾಡುವ ವಿಧಾನ

  • ಮೊದಲು ಕಡಲೇಬೇಳೆಯನ್ನು ೪ ಕಪ್ ನೀರಿನಲ್ಲಿ ೩-೪ ತಾಸು ನೆನೆಸಿ.
  • ನಂತರ ಅದನ್ನ ತೊಳೆದು, ೩ ಕಪ್ ನೀರಿನಲ್ಲಿ ಬೇಯಲು ಇಡಿ.
  • ಚೆನ್ನಾಗಿ ಕುಡಿಯುತ್ತಿರುವಾಗ, ತೆಂಗಿನ ತುರಿ, ಬೆಲ್ಲ, ಉಪ್ಪು ಸೇರಿಸಿ.
  • ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
  • ಆಗಾಗ ಮಗುಚುತ್ತ , ಪಾತ್ರೆಯ ತಳ ಹಿಡಿಯದಂತೆ ನೋಡಿಕೊಳ್ಳಿ.
  • ಪೂರ್ಣವಾಗಿ ಬೆಂದ ಕೂಡಲೇ, ಏಲಕ್ಕಿ ಪುಡಿ ಸೇರಿಸಿ.
  • ಬೇಕಾದಲ್ಲಿ ೨ ಚಮಚ ತುಪ್ಪವನ್ನು ಹಾಕಿ.
ಕೃಪೆ: ಸೌಮ್ಯ ಹೆಗಡೆ

ಗೋಧಿ ಹಿಟ್ಟಿನ ಶಿರಾ


ಹವ್ಯಕರ ಮನೆಗೆ ಅತಿಥಿಗಳು ಬ೦ದಾಗ ಪಟ್ ಅಂತ ಆಗುವ ಸಿಹಿ ಅಂದರೆ ಶಿರಾ. 
ಮಾಡಿ ರುಚಿ ನೋಡಿ................... 

ಬೇಕಾಗುವ ಪದಾರ್ಥಗಳು : 
  • ಗೋಧಿ ಹಿಟ್ಟು : 1 ಕಪ್ 
  • ಸಕ್ಕರೆ : 2 ಕಪ್ 
  • ಹಾಲು : 1/2 ಕಪ್ 
  • ನೀರು : 1/2 ಕಪ್ 
  • ಯಾಲಕ್ಕಿ ಪುಡಿ : 1 ಚಮಚ. 
  • ದ್ರಾಕ್ಷಿ, ಗೋಡಂಬಿ : ಸ್ವಲ್ಪ  
  • ತುಪ್ಪ : 1 ಕಪ್. 
  ಮಾಡುವ ವಿಧಾನ :
  • 1 ಪಾತ್ರೆಯಲ್ಲಿ ಹಾಲು + ನೀರು ಸೇರಿಸಿ ಬಿಸಿಮಾಡಿಕೊಳ್ಳಬೇಕು. 
  • ಇನ್ನೊ೦ದು ಬಾಣಲಿಯಲ್ಲಿ 1 ಕಪ್ ತುಪ್ಪ ಹಾಕಿ, ಅದು ಬಿಸಿಯಾದ ನಂತರ 1 ಕಪ್ ಗೋಧಿ ಹಿಟ್ಟು ಹಾಕಿ ಹುರಿಯಬೇಕು. 
  • ಗೋಧಿ ಹಿಟ್ಟು ಕೆಂಪಗೆ ಆಗುವವರೆಗೆ ಸಣ್ಣ ಉರಿಯಲ್ಲಿ ಹುರಿಯಬೇಕು. 
  • ನಂತರ ಬಿಸಿಯಾದ ಹಾಲನ್ನು ಗೋಧಿ ಹಿಟ್ಟಿಗೆ ಹಾಕಿ ಬಾಣಲಿಗೆ ಮುಚ್ಚಳವನ್ನು ಮುಚ್ಚಬೇಕು.  
  • 2 ನಿಮಿಷ ಬೇಯಲು ಬಿಟ್ಟು ನಂತರ ಅದಕ್ಕೆ 2 ಕಪ್ ಸಕ್ಕರೆ ಹಾಕಿ ಕೈ ಆಡಿಸುತ್ತಿರಬೇಕು. 
  • ಮಿಶ್ರಣ ಗಟ್ಟಿ ಆಗುತ್ತಾ ಬಂದ ಹಾಗೆ ಅದಕ್ಕೆ ದ್ರಾಕ್ಷಿ + ಗೋಡಂಬಿ+ಯಾಲಕ್ಕಿ ಪುಡಿ ಸೇರಿಸಬೇಕು.... 
  •  ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಉರಿಯನ್ನು ಆರಿಸಿ 5 ನಿಮಿಷ ಬಿಡಬೇಕು.  
  • ಈಗ ಬಿಸಿಬಿಸಿ ಶಿರಾ ರುಚಿ ನೋಡಲು ರೆಡಿ. ·         
ಇತರೆ ಮಾಹಿತಿಗಳು :  
  • ಮಾಡಲು ಬೇಕಾಗುವ ಸಮಯ 10 ನಿಮಿಷ........ 
  • 2 ದಿನ ಇಟ್ಟೂ ತಿನ್ನಬಹುದು..... 
  • ಅವಲಕ್ಕಿಯ ಜೊತೆಗೆ ತಿಂದರೆ ಇನ್ನೂ ಮಜಾ.
 ಕೃಪೆ : Vinuta. Hegde Keshinmane, Netherlands.

ಬಕ್ಕೆ ಹಣ್ಣಿನ ಮುಳ್ಕ

ಬಕ್ಕೆ ಹಣ್ಣು ಹಲಸಿನ ಹಣ್ಣಿನ ಅಣ್ಣನಂತೆ....ರುಚಿಯಲ್ಲಿ ಇನ್ನೂ ಒಂದು ಕೈ ಮೇಲೆಯೇ... ಬಕ್ಕೆ ಹಣ್ಣಿನ ಮುಳ್ಕ ಮಲೆನಾಡಿನ ಅಡುಗೆಮನೆಗಳಲ್ಲಿನ ಬ್ರಹ್ಮಾಸ್ತ್ರವಿದ್ದಂತೆ. ಹೊಟ್ಟೆ ತುಂಬಾ ತಿಂದ ಮೇಲೆ ಎಂಥವನಾದರೂ ಆನಂದದಿಂದ ಪುಳಕಿತನಾಗುತ್ತಾನೆ... ಅದನ್ನು ಹೇಗೆ ಮಾಡೋಣ? ಇಲ್ಲಿದೆ ವಿವರ....

ಬೇಕಾಗುವ ಪದಾರ್ಥಗಳು:
  • 10 - ಬಕ್ಕೆ ಹಣ್ಣಿನ ಸೊಳೆಯನ್ನು ಬೀಜ ತೆಗೆದು ಮಿಕ್ಸಿಯಲ್ಲಿ ಸಣ್ಣದಾಗಿ ಬೀಸಿಟ್ಟುಕೊಳ್ಳಿ.
  • 1 ಕಪ್ - ಚಿರೋಟಿ ರವೆ ಅಥವಾ ಸಣ್ಣಗೋಧಿ ರವೆ(ಉಪ್ಪಿಟ್ಟು ರವೆ).
  • 1 ಕಪ್ - ಸಣ್ಣಗೆ ತುರಿದ ಅಥವಾ ಮಿಕ್ಸಿಯಲ್ಲಿ ತುರಿದ ತೆಂಗಿನಕಾಯಿ ತುರಿ.
  • ಒಂದೂವರೆ ಕಪ್ - ಮನೆ ಬೆಲ್ಲ (ಆಲೆಮನೆ ಬೆಲ್ಲ).
  • ಅರ್ಧ ಕಪ್ - ಗೋಧಿ ಹಿಟ್ಟು.
  • 1 ಲೋಟ - ತಣ್ಣೀರು.
  • 1/2 ಚಮಚ - ಉಪ್ಪು.
  • ಅಡುಗೆ ಎಣ್ಣೆ -- ಶೇಂಗಾ ಎಣ್ಣೆ(ಮುಳ್ಕ ಕರಿಯಲು ಬೇಕಾಗುವಷ್ಟು)

ತಯಾರಿಸುವ ವಿಧಾನ:
  1. ಎಲ್ಲವನ್ನೂ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಂಡು 10 ನಿಮಿಷ ಈ ಮಿಶ್ರಣವನ್ನು ಮುಚ್ಚಿಡಿ.
  2. ಬಾಂಡ್ಲಿಯಲ್ಲಿ ಎಣ್ಣೆ ಕಾಯಿಸಿ
  3. ಮಂದನೆಯ ಬೆಂಕಿಯ ಬಿಸಿಯಲ್ಲಿ ಮುಳ್ಕದ ಹಿಟ್ಟನ್ನು ಬಿಸಿ ಎಣ್ಣೆಯಲ್ಲಿ ಹಾಕಿ ಕರಿಯಬೇಕು.
  4. ಸೌಟಲ್ಲಿ ಮುಳ್ಕವನ್ನು ಆಚೀಚೆ ಮಾಡುತ್ತಿರಿ. ಕತ್ತಿಸಬೇಡಿ.
  5. ಎಣ್ಣೆಯನ್ನು ಸೋಸಿ ಪೇಪರ್ ಇರುವ ಪಾತ್ರೆಗೆ ಹಾಕಿ.
ಮುಳ್ಕದ ಬಗ್ಗೆ ಇತರೆ ಮಾಹಿತಿಗಳು:
  • ಮಾಡಲು ಬೇಕಾಗುವ ಅಂದಾಜು ಸಮಯ -- 30 ನಿಮಿಷಗಳು.
  • ಮುಳ್ಕದ ಜೊತೆಗೆ ಎಮ್ಮೆ ತುಪ್ಪ ಇದ್ದರೆ ಮುಳ್ಕದ ರುಚಿ ದುಪ್ಪಟ್ಟು.
  • ಇದೇ ಥರಹ ಬಕ್ಕೆಹಣ್ಣಿನ ಬದಲು, ಬಾಳೆ ಹಣ್ಣಿನ / ಹಲಸಿನ ಹಣ್ಣಿನ ಮುಳ್ಕವನ್ನೂ ಮಾಡಬಹುದು.
  • ಎಣ್ಣೆಯ ಅಂಶ ಜಾಸ್ತಿ ಇರುವದರಿಂದ ಕೆಮ್ಮು ಇತ್ಯಾದಿಗಳಿದ್ದಾಗ ತಿನ್ನಬೇಡಿ.
  • ಬಿಸಿ ಬಿಸಿಯಾಗಿರುವಾಗಲೇ ತಿಂದ್ರೆ ಮುಳ್ಕ ಖಾಲಿ ಆಗಿದ್ದು ಗೊತ್ತಾಗುವದೇ ಇಲ್ಲ !!!
  • ಎಣ್ಣೆ ಪದಾರ್ಥ -- ಫ್ರಿಡ್ಜ್ ನಲ್ಲಿ ಇಡಬೇಡಿ.

ಕೃಪೆ : Usha Suresh Joshi, Bangalore.