ಅಪ್ಪೇಹುಳಿ (Appehuli)

ಆಪ್ಪೇಹುಳಿ....!!!
ಹೆಸರು ಕೇಳಿದರೇ ಬಾಯಲ್ಲಿ ನೀರೂರುತ್ತದೆ. ಇನ್ನು ನೀವೇ ತಯಾರಿಸಿ ತಿಂದರೆ....?

ಬೇಕಾಗುವ ಪದಾರ್ಥಗಳು:
 • 1 ನಿಂಬೆ ಹಣ್ಣು ಅಥವಾ 1 ಬೇಯಿಸಿದ ಮಾವಿನಕಾಯಿ ಅಥವಾ ಅರ್ಧ ಲೋಟ ಕಂಚೀಕಾಯಿ ರಸ.
ಒಗ್ಗರಣೆ ಪದಾರ್ಥಗಳು:
 • ಉದ್ದಿನಬೇಳೆ -- 1 ಚಮಚ
 • ಒಣ ಮೆಣಸು -- 1
 • ಸಾಸಿವೆ ಕಾಳು -- ಅರ್ಧ ಚಮಚ
 • ಹಸಿ ಮೆಣಸು - 1
 • ಜಜ್ಜಿದ ಬೆಳ್ಳುಳ್ಳಿ ಎಸಳು -- 2 (ಇಲ್ಲವಾದರೆ ಕರಿಬೇವಿನ ಸೊಪ್ಪು ಅಥವಾ ಇಂಗು ಹಾಕಬಹುದು)
 • ಸ್ವಲ್ಪ ಅರಿಶಿನ
 • ನೀರು - 2 ಲೋಟ
 • ಉಪ್ಪು - 1 ಚಮಚ
 • ಬೆಲ್ಲ / ಸಕ್ಕರೆ - ಅರ್ಧ ಚಮಚ
ತಯಾರಿಸುವ ವಿಧಾನ:

1. ಎರಡು ಲೋಟ ನೀರು + ಸ್ವಲ್ಪ ಉಪ್ಪು + 1 ಚಮಚ ಬೆಲ್ಲ (ಇಲ್ಲದಿದ್ದರೆ 1 ಚಮಚ ಸಕ್ಕರೆ) + ನಿಂಬೆ ಹಣ್ಣಿನ ರಸ (ಅಥವಾ ಬೇಯಿಸಿದ ಮಾವಿನಕಾಯಿ/ ಅರ್ಧ ಲೋಟ ಕಂಚೀಕಾಯಿ ರಸ) -- ಇವೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.

2. ಒಗ್ಗರಣೆ ::
 • 3 ಚಮಚ ಅಡುಗೆ ಎಣ್ಣೆಯನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ.
 • ಅದಕ್ಕೆ ಉದ್ದಿನಬೇಳೆ + 2 ಒಣ ಮೆಣಸು + ಸಾಸಿವೆ + ಹಸಿ ಮೆಣಸು + ಜಜ್ಜಿದ ಬೆಳ್ಳುಳ್ಳಿ + 1 ಚಿಟಿಕೆ ಅರಿಶಿನ -- ಇವನ್ನು ಹಾಕಿ.
 • ಸಾಸಿವೆ ಕಾಳು ಚಿಟಿಪಿಟಿ ಸದ್ದು ಮಾಡಲು ಶುರು ಮಾಡಿದಾಗ ಗ್ಯಾಸ್ ಬಂದು ಮಾಡಿ.

3. ಬಿಸಿಯಾದ ಒಗ್ಗರಣೆಯನ್ನು ಮೇಲೆ ಹೇಳಿದ ಪಾತ್ರೆಗೆ ಹಾಕಿಬಿಡಿ.
(ಆಗ ಹೊರಬರುವ ಅದ್ಭುತವಾದ ಪರಿಮಳವನ್ನು ಆಘ್ರಾಣಿಸಲು ಮರೆಯಬೇಡಿ :))

4. ಎಲ್ಲವನ್ನು ಚೆನ್ನಾಗಿ ಕಲುಕಿ, ಉಪ್ಪು ಬೇಕಾದರೆ ಹಾಕಿಕೊಳ್ಳಿ.

5. ಈಗ ಘಮಘಮಿಸುವ ಅಪ್ಪೇಹುಳಿಯನ್ನು ನಿಮ್ಮ ಬಾಯಲ್ಲಿ ಹಾಕಿ ರುಚಿ ನೋಡಿ :)

ಅಪ್ಪೇಹುಳಿ ಬಗ್ಗೆ ಇತರೆ ಮಾಹಿತಿಗಳು:
1. ಅಪ್ಪೇಹುಳಿಯನ್ನು ಅನ್ನದ ಜೊತೆಗೆ ಕಲಸಿ ತಿನ್ನಬಹುದು.
2. ಊಟದ ಜೊತೆ/ನಂತರ ಪಾನೀಯದಂತೆ ಕುಡಿಯಬಹುದು. (1 ಅಥವಾ 2 ಲೋಟ)
3. ಅಪ್ಪೇಹುಳಿಯ ಸೇವನೆಯ ನಂತರ ಸುಖನಿದ್ರೆಗೆ ಜಾರುವದು ಸಾಮಾನ್ಯ. ಆದ್ದರಿಂದ ಕಾರು / ಬೈಕು ಓಡಿಸುವ ಮೊದಲು ಅಪ್ಪೇಹುಳಿಯ ಸೇವನೆ ನಿಷಿದ್ಧ !!!
4. ಫ್ರಿಡ್ಜ್ ನಲ್ಲಿ ಇಟ್ಟು ಮರುದಿನ ಬಳಸಬಹುದು.
5. ಸಿರಸಿಯ ಸಾಮ್ರಾಟ್ ಹೋಟೆಲ್, ಹವ್ಯಕ ಖಾನಾವಳಿ, ಸುಬ್ಬಮ್ಮನ ಖಾನಾವಳಿ ಇತ್ಯಾದಿ ಕಡೆ ನೀವು ಅಪ್ಪೇಹುಳಿಯ ನಿಜವಾದ ರುಚಿಯನ್ನು ಆಸ್ವಾದಿಸಬಹುದು.
6.ನಿಮ್ಮ ಹವ್ಯಕ ಗೆಳೆಯರ ಮದುವೆಗೆ ಹೋದಾಗ ಅಪ್ಪೇಹುಳಿಯ ರುಚಿ ನೋಡಲು ಮರೆಯದಿರಿ.
7. ಮಾಡಲು ಬೇಕಾಗುವ ಅಂದಾಜು ಸಮಯ -- 10 ನಿಮಿಷಗಳು.
8. ಈಗ instant ಅಪ್ಪೇಹುಳಿ ಬಾಟಲ್ ಸಿರಸಿಯ TSSನ ಸೂಪರ್ ಮಾರ್ಕೆಟ್ ನಲ್ಲಿ ಲಭ್ಯ.

3 comments: