ಬಕ್ಕೆ ಹಣ್ಣಿನ ಮುಳ್ಕ

ಬಕ್ಕೆ ಹಣ್ಣು ಹಲಸಿನ ಹಣ್ಣಿನ ಅಣ್ಣನಂತೆ....ರುಚಿಯಲ್ಲಿ ಇನ್ನೂ ಒಂದು ಕೈ ಮೇಲೆಯೇ... ಬಕ್ಕೆ ಹಣ್ಣಿನ ಮುಳ್ಕ ಮಲೆನಾಡಿನ ಅಡುಗೆಮನೆಗಳಲ್ಲಿನ ಬ್ರಹ್ಮಾಸ್ತ್ರವಿದ್ದಂತೆ. ಹೊಟ್ಟೆ ತುಂಬಾ ತಿಂದ ಮೇಲೆ ಎಂಥವನಾದರೂ ಆನಂದದಿಂದ ಪುಳಕಿತನಾಗುತ್ತಾನೆ... ಅದನ್ನು ಹೇಗೆ ಮಾಡೋಣ? ಇಲ್ಲಿದೆ ವಿವರ....

ಬೇಕಾಗುವ ಪದಾರ್ಥಗಳು:
  • 10 - ಬಕ್ಕೆ ಹಣ್ಣಿನ ಸೊಳೆಯನ್ನು ಬೀಜ ತೆಗೆದು ಮಿಕ್ಸಿಯಲ್ಲಿ ಸಣ್ಣದಾಗಿ ಬೀಸಿಟ್ಟುಕೊಳ್ಳಿ.
  • 1 ಕಪ್ - ಚಿರೋಟಿ ರವೆ ಅಥವಾ ಸಣ್ಣಗೋಧಿ ರವೆ(ಉಪ್ಪಿಟ್ಟು ರವೆ).
  • 1 ಕಪ್ - ಸಣ್ಣಗೆ ತುರಿದ ಅಥವಾ ಮಿಕ್ಸಿಯಲ್ಲಿ ತುರಿದ ತೆಂಗಿನಕಾಯಿ ತುರಿ.
  • ಒಂದೂವರೆ ಕಪ್ - ಮನೆ ಬೆಲ್ಲ (ಆಲೆಮನೆ ಬೆಲ್ಲ).
  • ಅರ್ಧ ಕಪ್ - ಗೋಧಿ ಹಿಟ್ಟು.
  • 1 ಲೋಟ - ತಣ್ಣೀರು.
  • 1/2 ಚಮಚ - ಉಪ್ಪು.
  • ಅಡುಗೆ ಎಣ್ಣೆ -- ಶೇಂಗಾ ಎಣ್ಣೆ(ಮುಳ್ಕ ಕರಿಯಲು ಬೇಕಾಗುವಷ್ಟು)

ತಯಾರಿಸುವ ವಿಧಾನ:
  1. ಎಲ್ಲವನ್ನೂ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಂಡು 10 ನಿಮಿಷ ಈ ಮಿಶ್ರಣವನ್ನು ಮುಚ್ಚಿಡಿ.
  2. ಬಾಂಡ್ಲಿಯಲ್ಲಿ ಎಣ್ಣೆ ಕಾಯಿಸಿ
  3. ಮಂದನೆಯ ಬೆಂಕಿಯ ಬಿಸಿಯಲ್ಲಿ ಮುಳ್ಕದ ಹಿಟ್ಟನ್ನು ಬಿಸಿ ಎಣ್ಣೆಯಲ್ಲಿ ಹಾಕಿ ಕರಿಯಬೇಕು.
  4. ಸೌಟಲ್ಲಿ ಮುಳ್ಕವನ್ನು ಆಚೀಚೆ ಮಾಡುತ್ತಿರಿ. ಕತ್ತಿಸಬೇಡಿ.
  5. ಎಣ್ಣೆಯನ್ನು ಸೋಸಿ ಪೇಪರ್ ಇರುವ ಪಾತ್ರೆಗೆ ಹಾಕಿ.
ಮುಳ್ಕದ ಬಗ್ಗೆ ಇತರೆ ಮಾಹಿತಿಗಳು:
  • ಮಾಡಲು ಬೇಕಾಗುವ ಅಂದಾಜು ಸಮಯ -- 30 ನಿಮಿಷಗಳು.
  • ಮುಳ್ಕದ ಜೊತೆಗೆ ಎಮ್ಮೆ ತುಪ್ಪ ಇದ್ದರೆ ಮುಳ್ಕದ ರುಚಿ ದುಪ್ಪಟ್ಟು.
  • ಇದೇ ಥರಹ ಬಕ್ಕೆಹಣ್ಣಿನ ಬದಲು, ಬಾಳೆ ಹಣ್ಣಿನ / ಹಲಸಿನ ಹಣ್ಣಿನ ಮುಳ್ಕವನ್ನೂ ಮಾಡಬಹುದು.
  • ಎಣ್ಣೆಯ ಅಂಶ ಜಾಸ್ತಿ ಇರುವದರಿಂದ ಕೆಮ್ಮು ಇತ್ಯಾದಿಗಳಿದ್ದಾಗ ತಿನ್ನಬೇಡಿ.
  • ಬಿಸಿ ಬಿಸಿಯಾಗಿರುವಾಗಲೇ ತಿಂದ್ರೆ ಮುಳ್ಕ ಖಾಲಿ ಆಗಿದ್ದು ಗೊತ್ತಾಗುವದೇ ಇಲ್ಲ !!!
  • ಎಣ್ಣೆ ಪದಾರ್ಥ -- ಫ್ರಿಡ್ಜ್ ನಲ್ಲಿ ಇಡಬೇಡಿ.

ಕೃಪೆ : Usha Suresh Joshi, Bangalore.

No comments:

Post a Comment